ಕೋಡುರೈಟ್

	ವಿಶಾಖಪಟ್ಟಣದ ಬಳಿ ಇರುವ ಕೋಡೂರು ಮ್ಯಾಂಗನೀಸ್ ಗಣಿಗಳಲ್ಲಿ ಕಂಡುಬರುವ ಮ್ಯಾಂಗನೀಸ್ ಅದುರಿನ ಶಿಲೆ. ಇದರಲ್ಲಿ ಬಲುಮಟ್ಟಿಗೆ ಫೆಲ್ಡ್‍ಸ್ಪಾರ್, ಮ್ಯಾಂಗನೀಸ್ ಗಾರ್ನೆಟ್ ಮತ್ತು ಅಪಟೈಟ್ ಖನಿಜಗಳಿವೆ. ಹಲವು ಬಾರಿ ಕ್ವಾಟ್ರ್ಸ್ ಮತ್ತು ಮ್ಯಾಂಗನೀಸ್ ಪೈರಾಕ್ಸೀನ್‍ಗಳು ಸಹ ಕಂಡುಬಂದಿವೆ. ಫೆಲ್ಡ್‍ಸ್ಪಾರ್ ಸಾಮಾನ್ಯವಾಗಿ ಹೆಚ್ಚು ಶಿಥಿಲಗೊಂಡು ಒಂದು ತೆರನಾದ ಸುದ್ದೆಮಣ್ಣಿನಂತಿರುತ್ತದೆ. ಗಾರ್ನೆಟ್ ಹರಳಿನೋಪಾದಿಯಲ್ಲಿದ್ದು ಗುಂಪಾಗಿ ಅಥವಾ ಹರಡಿದಂತಿರುತ್ತದೆ. ಮತ್ತೊಂದು ಮುಖ್ಯ ಖನಿಜವಾದ ಅಪಟೈಟ್ ನೀಲಿ ಮಿಶ್ರಿತ ಹಸಿರು ಬಣ್ಣದ ಗುಂಡನೆಯ ಹರಳುಗಳಾಗಿ ತೋರಿಬರುತ್ತದೆ. ಒಟ್ಟಿನಲ್ಲಿ ಈ ವರ್ಗದ ಶಿಲೆಗಳು ಹೆಚ್ಚಿನ ಶಿಥಿಲೀಕರಣಕ್ಕೊಳಗಾಗಿರುತ್ತವೆ. ಹಾಗಿಲ್ಲದಿದ್ದಲ್ಲಿ ಶಿಲೆಯ ಕಣರಚನೆಯನ್ನು ಕಷ್ಟವಿಲ್ಲದೆ ಗುರುತಿಸಬಹುದು. ಹಲವು ವೇಳೆ ಕಣಗಳು ಗಾತ್ರದಲ್ಲಿ ಬಲು ದಪ್ಪವಾಗಿಯೂ ಇರುವುದುಂಟು. ಈ ಗುಂಪಿನ ಶಿಲೆಗಳ ರಾಸಾಯನಿಕ ಸಂಯೋಜನೆ ಒಂದೇ ತೆರನಾಗಿರದೆ ಆಮ್ಲೀಯ ವರ್ಗದಿಂದ ಪ್ರತ್ಯಾಮ್ಲೀಯ ವರ್ಗದವರೆಗೆ ಹರಡಿರುತ್ತದೆ. ಖನಿಜ ಸಂಯೋಜನೆಯಲ್ಲೂ ಹೀಗೆಯೇ. ಸಾಮಾನ್ಯವಾಗಿ ಶಿಲೆಯಲ್ಲಿರುವ ಮುಖ್ಯ ಖನಿಜವನ್ನನುಸರಿಸಿ ಕ್ವಾಟ್ರ್ಸ್ ಕೋಡುರೈಟ್, ಪೈರಾಕ್ಸೀನ್ ಕೋಡುರೈಟ್ ಮತ್ತು ಬಯೊಟೈಟ್ ಕೋಡುರೈಟ್ ಎಂದು ಹಲವಾರು ಬಗೆಗಳನ್ನು ಗುರುತಿಸಲಾಗಿದೆ.

	ಈ ವರ್ಗದ ಶಿಲೆಗಳು ಬಲುಮಟ್ಟಿಗೆ ಕ್ಯಾಲ್ಕೇರಿಯಸ್ ಅಥವಾ ಸ್ಕ್ಯಾಪೊಲಿಟಿಕ್ ನೈಸ್ ಶಿಲೆಗಳೊಡನೆ ಹರಡಿಕೊಂಡಿರುತ್ತವೆ. ಅಲ್ಲದೆ ಗ್ರಾನೈಟ್ ಮತ್ತು ಖಾಂಡಲೈಟ್ ಶಿಲೆಗಳೊಡನೆಯೂ ಆಗಾಗ ಹರಡಿರಬಹುದು. ಆದರೂ ಈ ಯಾವ ಶಿಲೆಗಳನ್ನೂ ಛೇದಿಸುವುದಿಲ್ಲ. ಈ ಶಿಲೆ ಮ್ಯಾಂಗನೀಸ್ ಅದುರಿಗೆ ಮುಖ್ಯ ಆಗರ. ಇದರಲ್ಲಿ ಅತ್ಯಂತ ಹೆಚ್ಚಿನ ಮೊತ್ತದಲ್ಲಿ ಮ್ಯಾಂಗನೀಸ್ ಇದೆ.

	ಕೋಡುರೈಟ್ ಉಂಟಾದ ರೀತಿಯನ್ನು ಹಲವಾರು ಭೂವಿಜ್ಞಾನಿಗಳು ವಿವೇಚಿಸಿದ್ದಾರೆ. ಇವರಲ್ಲಿ ಒಬ್ಬನಾದ ಲೂಯಿ ಫರ್ಮರ್‍ರ ಅಭಿಪ್ರಾಯ ಹೀಗಿದೆ: ಬೃಹದಾಕಾರದ ಅಗ್ನಿಶಿಲೆಯೊಂದು ಅಂತರಾಳದಿಂದ ಮೇಲ್ಭಾಗಕ್ಕೆ ದಾರಿ ಮಾಡಿಕೊಂಡು ಬರುವಾಗ, ಮಾರ್ಗಮಧ್ಯದಲ್ಲಿ ಮ್ಯಾಂಗನೀಸ್ ಅದುರಿನ ಶಿಲೆಯನ್ನು ಹೊಕ್ಕು ಕ್ರಮೇಣ ವ್ಯಾಪಿಸಿ ಅದನ್ನು ನಾನಾಬಗೆಯಲ್ಲಿ ಮಾರ್ಪಡಿಸಿದ ಕಾರಣ ಕೋಡುರೈಟ್ ಗುಂಪಿನ ಶಿಲೆಗಳುಂಟಾಗಿವೆ. 
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ